You are here
Home > International > ಸಂವಿಧಾನ ಪೀಠಕ್ಕೆ ಬಹುಪತ್ನಿತ್ವ

ಸಂವಿಧಾನ ಪೀಠಕ್ಕೆ ಬಹುಪತ್ನಿತ್ವ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಅನುಸರಿಸಲಾಗುತ್ತಿರುವ ‘ನಿಖಾ ಹಲಾಲಾ’ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳ ಸಾಂವಿಧಾನಿಕ ಮೌಲಿಕತೆಯನ್ನು ಸಂವಿಧಾನ ಪೀಠದ ಮೂಲಕ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ‘ತ್ರಿವಳಿ ತಲಾಖ್‌’ ಪದ್ಧತಿಯನ್ನು ಸಂವಿಧಾನ ಪೀಠವು ಇತ್ತೀಚೆಗೆ ನಿಷೇಧಿಸಿತ್ತು.

ಈ ಪದ್ಧತಿಗಳಿಂದ ತೊಂದರೆಗೊಳಗಾದ ಮಹಿಳೆಯರು ಮತ್ತು ಇತರರು ಸಲ್ಲಿಸಿರುವ ಹಲವು ಅರ್ಜಿಗಳನ್ನು ಸಂವಿಧಾನ ಪೀಠದಿಂದ ವಿಚಾರಣೆಗೆ ಒಳಪಡಿಸಲು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರ ಪೀಠ ಆದೇಶಿಸಿದೆ.

ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪದ್ಧತಿಗಳು ಮಹಿಳೆಯರ ಮೇಲೆ ಬೀರುವ ಪರಿಣಾಮ ದಿಗಿಲು ಹುಟ್ಟಿಸುವಂತಿದೆ. ತ್ರಿವಳಿ ತಲಾಖ್‌ ಬಗ್ಗೆ ತೀರ್ಪು ನೀಡಿದ ಸಂವಿಧಾನ ಪೀಠವು ಈ ವಿಚಾರಗಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಮೋಹನ್‌ ಪರಾಶರನ್‌ ಹೇಳಿದರು.

ಬಹುಪತ್ನಿತ್ವದ ಮೌಲಿಕತೆ ಒರೆಗೆ
ನವದೆಹಲಿ: 
ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಬಹುಪತ್ನಿತ್ವ ಮತ್ತು ಇತರ ವಿವಾಹ ಪದ್ಧತಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಲು ನಿರ್ಧರಿಸಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೋಟಿಸ್‌ ನೀಡಿದೆ.

ದೆಹಲಿಯ ಮಹಿಳೆ ನಫೀಸಾ ಖಾನ್‌ ಅವರು ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪದ್ಧತಿಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಧಾರದಲ್ಲಿ ಈ ನೋಟಿಸ್‌ ನೀಡಲಾಗಿದೆ. ನಫೀಸಾ ಅವರ ಅರ್ಜಿಯ ಜತೆಗೆ, ಇತರ ಮೂವರು ಸಲ್ಲಿಸಿರುವ ಅರ್ಜಿಗಳನ್ನು ಜತೆಯಾಗಿಸಿ ಸಂವಿಧಾನ ಪೀಠವು ವಿಚಾರಣೆ ನಡೆಸಲಿದೆ.

ನಿಖಾ ಮುತಾ ಮತ್ತು ನಿಖಾ ಮಿಸ್ಯಾರ್‌ ಎಂಬ ಪದ್ಧತಿಗಳು ಸಂವಿಧಾನದ ಅಡಿಯಲ್ಲಿ ಮೌಲಿಕವೇ ಎಂಬುದನ್ನೂ ಸಂವಿಧಾನ ಪೀಠವು ಪರಿಶೀಲಿಸಲಿದೆ. ಈ ಎರಡೂ ತಾತ್ಕಾಲಿಕ ಮದುವೆ ಪದ್ಧತಿಗಳಾಗಿವೆ. ಮೊದಲೇ ಒಪ‍್ಪಿಕೊಂಡ ಅವಧಿಯವರೆಗೆ ಮಾತ್ರ ಈ ಮದುವೆಗಳು ಊರ್ಜಿತವಾಗಿರುತ್ತವೆ.

ಈ ಎಲ್ಲ ಪದ್ಧತಿಗಳು ವೈಯಕ್ತಿಕ ಕಾನೂನು ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದು ನಿಜ. ಆದರೆ ಇವುಗಳಿಗೆ ಕಾನೂನಿನ ಪರಿಶೀಲನೆಯಿಂದ ವಿನಾಯಿತಿ ಇಲ್ಲ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಮೋಹನ್ ಪರಾಶರನ್‌ ಹೇಳಿದರು.

ನಫೀಸಾ ಹೋರಾಟ: ಮುಸ್ಲಿಂ ವೈಯಕ್ತಿಕ ಕಾನೂನಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 494 (ಹೆಂಡತಿ ಅಥವಾ ಗಂಡ ಬದುಕಿರುವಾಗಲೇ ಮತ್ತೊಂದು ಮದುವೆಯಾಗುವುದಕ್ಕೆ ತಡೆ) ನಿರುಪಯುಕ್ತವಾಗಿದೆ. ಗಂಡ ಬೇರೊಂದು ಮದುವೆಯಾದಾಗ ಆತನ ವಿರುದ್ಧ ದೂರು ಸಲ್ಲಿಸಲು ಮುಸ್ಲಿಂ ಮಹಿಳೆಗೆ ಅವಕಾಶವೇ ಇಲ್ಲದಂತಾಗಿದೆ ಎಂದು ನಫೀಸಾ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿರುವ ಬೇರೆ ಧರ್ಮದ ಮಹಿಳೆಯರಿಗೆ ಬಹುಪತ್ನಿತ್ವದಿಂದ ಸಾಂವಿಧಾನಿಕ ರಕ್ಷಣೆ ಇದೆ. ಆದರೆ ಮುಸ್ಲಿಂ ಮಹಿಳೆಯರು ಈ ರಕ್ಷಣೆಯಿಂದ ವಂಚಿತರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ತಾವು ಇದರ ಸಂತ್ರಸ್ತೆಯೂ ಹೌದು ಎಂದು ಅವರು ಹೇಳಿದ್ದಾರೆ. ‘ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುವ ಮೊದಲೇ ನನ್ನ ಗಂಡ ಬೇರೊಂದು ಮದುವೆಯಾಗಿದ್ದ. ಆತನ ವಿರುದ್ಧ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 494 ಮತ್ತು 498ಎ (ಗಂಡ ಅಥವಾ ಗಂಡನ ಸಂಬಂಧಿಕರಿಂದ ಕ್ರೌರ್ಯ) ಅಡಿಯಲ್ಲಿ ದಾಖಲಿಸಲು ಪೊಲೀಸರು ಒಪ್ಪಲಿಲ್ಲ. ಯಾಕೆಂದರೆ, ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದೆ ಎಂದು ಪೊಲೀಸರು ಹೇಳಿದ್ದರು’ ಎಂದು ನಫೀಸಾ ತಿಳಿಸಿದ್ದಾರೆ.

ದೆಹಲಿಯ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಇದೇ 5ರಂದು ಅರ್ಜಿ ಸಲ್ಲಿಸಿ ಬಹುಪತ್ನಿತ್ವ ಮತ್ತು ನಿಖಾ ಹಲಾಲಾವನ್ನು ನಿಷೇಧಿಸಬೇಕು ಎಂದು ಕೋರಿದ್ದಾರೆ.

ತ್ರಿವಳಿ ತಲಾಖ್‌ ಹಾದಿಯಲ್ಲಿ ಬಹುಪತ್ನಿತ್ವ?
ಸುನ್ನಿ ಮುಸ್ಲಿಮರಲ್ಲಿ ವ್ಯಾಪಕವಾಗಿದ್ದ ತ್ರಿವಳಿ ತಲಾಖ್‌ ಪದ್ಧತಿಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 3:2 ಬಹುಮತದಲ್ಲಿ ನಿಷೇಧಿಸಿತ್ತು. ಮುಸ್ಲಿಮರ ಧರ್ಮ ಗ್ರಂಥವಾದ ಕುರ್‌ಆನ್‌ನಲ್ಲಿ ತ್ರಿವಳಿ ತಲಾಖ್‌ಗೆ ಅವಕಾಶ ಇಲ್ಲ; ಇದು ಇಸ್ಲಾಂನ ಕಾನೂನು ಶರೀಯತ್‌ನ ಉಲ್ಲಂಘನೆಯೂ ಹೌದು ಎಂದು ಕಳೆದ ಆಗಸ್ಟ್‌ 22ರಂದು ನೀಡಿದ ತೀರ್ಪಿನಲ್ಲಿ ಹೇಳಲಾಗಿತ್ತು. ಮುಸ್ಲಿಂ ಸಮುದಾಯದಲ್ಲಿರುವ ಬಹುಪತ್ನಿತ್ವವನ್ನು ನಿಷೇಧಿಸಬೇಕು ಎಂದು ಹಲವು ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.

Please follow and like us:

Leave a Reply

Top